ಕ್ರಿಯೇಟಿವ್ ಕನ್ನಡ ಸಾಹಿತ್ಯ ಸಂಘ : ಡಾ. ಪಾದೆಕಲ್ಲು ವಿಷ್ಣು ಭಟ್ಟರಿಂದ ಸಾಹಿತ್ಯ ಸ್ಫೂರ್ತಿ
ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದ ನೂತನ ಪಯಣಕ್ಕೆ ಚಾಲನೆಯ ರೂಪದಲ್ಲಿ ಕನ್ನಡ ಸಾಹಿತ್ಯ ಸಂಘವನ್ನು ರಚಿಸಲಾಯಿತು.
ಕನ್ನಡ ಸಾಹಿತ್ಯ ಸಂಘದ ಉದ್ಘಾಟನೆಗೆ ಆಗಮಿಸಿದ ವಿದ್ವಾಂಸರು, ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಪಾದೆಕಲ್ಲು ವಿಷ್ಣು ಭಟ್ಟರು ಮಾತನಾಡಿ “ಕನ್ನಡವನ್ನು ಉಳಿಸಿ ಬೆಳೆಸಬೇಕಾದ್ದು ಕನ್ನಡಿಗರಾದ ನಮ್ಮ ಕರ್ತವ್ಯ. ಸಾಹಿತ್ಯದ ಓದುವಿಕೆ ಮತ್ತು ಬರೆಯುವಿಕೆ ನಮ್ಮ ಅನುಭವಗಳನ್ನು ಹೆಚ್ಚಿಸುವ ಪ್ರಕ್ರಿಯೆ. ಆದ್ದರಿಂದ ಸಾಹಿತ್ಯವನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಿ. ಭಾಷೆಯ ಬಗೆಗೆ ಹೆಚ್ಚಿನ ಗಮನ ಕೊಡಿ. ವಾಕ್ಯಗಳ ರಚನೆಯಲ್ಲಿ ತೊಡಗಿ, ಬಳಿಕ ಸಾಹಿತ್ಯ ರಚನೆಗೂ ಮುಂದಾಗಬೇಕು ಎನ್ನುತ್ತಾ ಕನ್ನಡ ಸಾಹಿತ್ಯದ ಕಾಲಘಟ್ಟಗಳು, ನಿಘಂಟುಗಳು, ಗದ್ಯ – ಪದ್ಯ ಕವಿಗಳ ವಿವರ, ಕವಿರಾಜಮಾರ್ಗ, ತಾಳೆಗರಿಗಳ ಉಲ್ಲೇಖದೊಂದಿಗೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಕುರಿತು ವಿವರಿಸಿದರು. ಕ್ರಿಯೇಟಿವ್ ಕನ್ನಡ ಸಾಹಿತ್ಯ ಸಂಘದ ಮೂಲಕ ಇನ್ನಷ್ಟು ಸೃಜನಾತ್ಮಕ ಸಾಹಿತ್ಯ ಕೃತಿಗಳು ಮೂಡಿ ಬರಲಿ” ಎಂದು ಹಾರೈಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು “ಭಾಷೆ ಎಂದರೆ ಕೇವಲ ಸಂವಹನದ ಸಾಧನವಲ್ಲ. ಅದು ನಮ್ಮ ಸಂಸ್ಕೃತಿಯ ಪ್ರತಿರೂಪ. ಕನ್ನಡ ಸಾಹಿತ್ಯವು ಕೇವಲ ಪುಸ್ತಕಗಳಲ್ಲಿ ಸೀಮಿತವಾಗಿರದೆ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ಬದುಕಬೇಕು. ಓದುವುದರ ಜೊತೆಗೆ ಅನುಭವಿಸುವ ಕನ್ನಡವೇ ನಿಜವಾದ ಕನ್ನಡ. ಸಾಹಿತ್ಯ ಸಂಘಗಳು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಿಂತನೆಗೆ ದಾರಿ ತೆರೆಯುತ್ತವೆ. ಈ ಸದವಕಾಶವನ್ನು ಬಳಸಿಕೊಳ್ಳಿ” ಎಂದು ಕರೆ ನೀಡಿದರು.
ನಿನಾದ ತ್ರೈಮಾಸಿಕ ಬಿಡುಗಡೆ
ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನ ತ್ರೈಮಾಸಿಕ ‘ನಿನಾದ’ ಪತ್ರಿಕೆಯನ್ನು ಡಾ. ಪಾದೆಕಲ್ಲು ವಿಷ್ಣು ಭಟ್ಟರಿಂದ ಬಿಡುಗಡೆಗೊಳಿಸಲಾಯಿತು. ತ್ರೈಮಾಸಿಕದಲ್ಲಿ ಕಥೆ – ಕವನಗಳನ್ನು ಬರೆದ ವಿದ್ಯಾರ್ಥಿಗಳಿಗೆ ಪುಸ್ತಕಗಳ ಉಡುಗೊರೆಯನ್ನು ನೀಡಲಾಯಿತು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಡಾ. ಪಾದೆಕಲ್ಲು ವಿಷ್ಣು ಭಟ್ಟರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಸಂಘದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಕೃತಿಗಳನ್ನು ಹಂಚಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಸಂಸ್ಥಾಪಕರಾದ ಆದರ್ಶ ಎಂ.ಕೆ, ಕನ್ನಡ ಉಪನ್ಯಾಸಕರಾದ ಸಂತೋಷ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೋಧಕ – ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಸಂತೋಷ ಸ್ವಾಗತಿಸಿ, ಲೋಹಿತ್ ಎಸ್.ಕೆ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.