ಹೆಚ್ ಕೆ ಎಸ್ ಕಾಲೇಜಿನಲ್ಲಿ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದ ಸಮಾರೋಪ ಸಮಾರಂಭ
ದಿನಾಂಕ:05-12-2025 ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ, ಹಾಸನ ಉಪ ನಿರ್ದೇಶಕರ ಕಛೇರಿ, ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜು, ಹಾಸನ ಹಾಗೂ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ 2025 – 26ನೇ ಶೈಕ್ಷಣಿಕ ಸಾಲಿನ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟವು ಹಾಸನದ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಪ್ರವೀಣ್ ಎ ಅವರು ಕ್ರೀಡೆಯ ರೂಪು ರೇಷೆಗಳನ್ನು ಕುರಿತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಿಜಯ್ ಸಿ ಪಿ ಜಿಲ್ಲಾ ಕ್ರೀಡಾ ಸಂಯೋಜಕ, ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ಹಾಸನ ಇವರು ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯ ಯಶಸ್ಸಿಗೆ ಹೆಚ್ ಕೆ ಎಸ್ ಪದವಿ ಪೂರ್ವ ಕಾಲೇಜಿನ ಕಾರ್ಯ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಯ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆಯ ಉಪನಿರ್ದೇಶಕರಾದ ಶ್ರೀ ಗಂಗಾಧರ ಕೆ ಪಿ ಅವರು ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಸೋತವರು ಕುಗ್ಗದೆ ಮುಂದಿನ ಕಾರ್ಯಕ್ಕೆ ಪ್ರವೃತ್ತರಾಗಬೇಕೆಂದು ಅಧ್ಯಕ್ಷೀಯ ನುಡಿಗಳನ್ನಾಡಿದರು.
ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾ ಪಂದ್ಯಾವಳಿಯಲ್ಲಿ ರಾಜ್ಯದ 33 ಶೈಕ್ಷಣಿಕ ಜಿಲ್ಲೆಗಳು ಭಾಗವಹಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಾಲಕರ ಮತ್ತು ಬಾಲಕಿಯರ ವಿಭಾಗ ಪ್ರಥಮ ಬಹುಮಾನ, ಬೆಂಗಳೂರು ದಕ್ಷಿಣ ಜಿಲ್ಲೆಯ ಬಾಲಕರು ಮತ್ತು ಬಾಲಕಿಯರ ವಿಭಾಗ ದ್ವಿತೀಯ ಬಹುಮಾನ, ಮೈಸೂರು ಜಿಲ್ಲೆಯ ಬಾಲಕರು ಮತ್ತು ಬಾಲಕಿಯರ ವಿಭಾಗ ಮೂರನೇ ಬಹುಮಾನ, ಬೀದರ್ ಜಿಲ್ಲೆಯ ಬಾಲಕರ ವಿಭಾಗದಲ್ಲಿ ನಾಲ್ಕನೇ ಬಹುಮಾನ ಹಾಗೂ ಉಡುಪಿ ಜಿಲ್ಲೆಯ ಬಾಲಕಿಯರ ವಿಭಾಗದಲ್ಲಿ ನಾಲ್ಕನೇ ಬಹುಮಾನವನ್ನು ಪಡೆದುಕೊಂಡು ಸಾಧನೆಗೈದ ಕ್ರೀಡಾಪಟುಗಳಿಗೆ ಪದಕಗಳು ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮವನ್ನು ಸಂಸ್ಕೃತ ಉಪನ್ಯಾಸಕರಾದ ಗಣೇಶ್ ಕೆ ಭಟ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ ನಿರೂಪಿಸಿದರೆ, ಆಂಗ್ಲ ಉಪನ್ಯಾಸಕರಾದ ಶ್ರೀನಿವಾಸ್ ಜೆ ಎನ್ ವಂದಿಸಿದರು.