ಹೆಚ್ .ಕೆ .ಎಸ್ ಪಿ ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕ್ರಿಯೇಟಿವ್ ಸ್ಫೂರ್ತಿ ಮಾತು ಹಾಗೂ ಕಲಾರಂಗ ಕಾರ್ಯಕ್ರಮ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೆಚ್.ಕೆ.ಎಸ್ ಪಿ ಯು ಕಾಲೇಜು, ಹಾಸನ ಇಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮಾತು ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕಲಾರಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ಗಣನಾಥ್ ಶೆಟ್ಟಿ ಬಿ ಅವರು ನಮ್ಮ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾರ್ಥಿಗಳ ನೈತಿಕ ಮೌಲ್ಯಗಳ ಜೊತೆಗೆ ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಾಹಿತಿ, ನಟ, ಗಾಯಕರು ಮತ್ತು ನಿರ್ದೇಶಕರಾದ ಶ್ರೀ ಎಚ್ ಎಂ ನಾಗರಾಜರಾವ್ ಕಲ್ಕಟ್ಟೆ ಅವರು ವಿದ್ಯಾರ್ಥಿಗಳು ನಿರ್ದಿಷ್ಟವಾದ ಬದುಕನ್ನು ರೂಪಿಸಿಕೊಳ್ಳುವ ಗುರಿ ಹೊಂದಿರಬೇಕು. ತಾಳ್ಮೆ, ಸಹನೆಯ ಗುಣವಿರಬೇಕು, ಬದುಕಿನಲ್ಲಿ ಸಮಯ ಪರಿಪಾಲನೆ ಮಹತ್ವವಾದದ್ದು, ಹೊಂದಾಣಿಕೆ ಜೀವನ ಪ್ರಬುದ್ಧತೆಯನ್ನು ಕಲಿಸುತ್ತದೆ. ಬದುಕಿನಲ್ಲಿ ಹಲವು ಮಾರ್ಗಗಳಿವೆ ಉತ್ತಮ ಭವಿಷ್ಯದ ನಿರ್ಮಾಣ ನಮ್ಮದಾಗಬೇಕೆಂದು ಕಿವಿ ಮಾತುಗಳನ್ನಾಡಿದರು. ಹೆಚ್ ಕೆ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹೆಚ್ ಕೆ ಸುರೇಶ್ ಅವರು ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣವನ್ನು ಪಡೆಯಬೇಕೆಂದು, ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಕುರಿತು ಮಾತನಾಡಿದರು. ಹೆಚ್. ಕೆ. ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಹೆಚ್.ಎಸ್. ಪ್ರಶಾಂತ್ ಗೌಡ ಅವರು ಕಾರ್ಯಕ್ರಮವನ್ನುದ್ದೇಶಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡವು.
ವೇದಿಕೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ವಿಮಲ್ ರಾಜ್ ಜಿ, ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಪ್ರವೀಣ್ ಎ ಹಾಗೂ ಉಪಪ್ರಾಂಶುಪಾಲರಾದ ಆದಿತ್ಯ ವಟಿ ಕೆ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾದ ರಮೇಶ್ ಎಂ ಅವರು ನಿರೂಪಿಸಿದರು. ಆಂಗ್ಲ ಉಪನ್ಯಾಸಕರಾದ ಚಿಂತನ್ ಬಿ ಆರ್ ಸ್ವಾಗತಿಸಿದರೆ, ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.