ಕಲ್ಯಾಣಪುರ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ
ಶಿಕ್ಷಣದ ಉದ್ದೇಶ ಮನುಷ್ಯನನ್ನು ಸಂಸ್ಕಾರವಂತರನ್ನಾಗಿಸುವುದಾಗಿದೆ.ಪಡೆದ ಶಿಕ್ಷಣದಿಂದ ಉದ್ಯೋಗ ಗಳಿಸುವುದು ಒಂದು ಗುರಿಯಾದರೆ ಬದುಕಿನ ಉದ್ದೇಶ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವಿಸುವುದಾಗಿದೆ .ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡಬೇಕು.ವಿದ್ಯಾರ್ಥಿ ಜೀವನದಲ್ಲಿ ಕೆಲಸ ಮುಂದೂಡುವ,ಆಲಸ್ಯ, ಕೆಟ್ಟ ಆಕರ್ಷಣೆ ಗೆ ಒಳಗಾಗುವುದನ್ನು ಬಿಟ್ಟು ಉತ್ತಮ ವಿಚಾರದಲ್ಲಿ ಮನವಿಟ್ಟು ಕಾರ್ಯ ಸಾಧಿಸಬೇಕು ಎಂದು ಖ್ಯಾತ ವಾಗ್ಮಿ ,ನಿವೃತ್ತ ಮುಖ್ಯೋಪಾಧ್ಯಾಯರಾದ ಮುನಿರಾಜ ರೆಂಜಾಳ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜು ಕಲ್ಯಾಣಪುರದಲ್ಲಿ ನಡೆದ ಕ್ರಿಯೇಟಿವ್ ಸ್ಪೂರ್ತಿ ಮಾತು ಸರಣಿ ಉಪನ್ಯಾಸ ಕಾರ್ಯಕ್ರಮ ದಲ್ಲಿ ಶಿಕ್ಷಣದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.
ತ್ರಿಶಾ ಪ.ಪೂ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಹೆಗಡೆ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಜೋಯೆಲ್ ಮನೋಜ್ ಫೆರ್ನಾಂಡಿಸ್ ಅತಿಥಿಗಳನ್ನು ಗೌರವಿಸಿದರು.ಆಡಳಿತಾಧಿಕಾರಿ ಜಯಪ್ರಕಾಶ್ ಶೆಟ್ಟಿ ವಂದನಾರ್ಪಣೆಗೈದರು..