ಕಾರ್ಕಳ : ಕ್ರಿಯೇಟಿವ್ ಕಾಲೇಜಿನ ಸಹಕಾರದೊಂದಿಗೆ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ
ಕಾರ್ಕಳ ಪರಿಸರದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ರಾಷ್ಟ್ರೀಯ ಸೇವಾ ಯೋಜನೆ ಪ್ರಾಂತೀಯ ಕೇಂದ್ರ ಬೆಂಗಳೂರು, ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ ) ರಾಷ್ಟ್ರೀಯ ಸೇವಾ ಯೋಜನೆ ಕೋಶ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇದರ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮವನ್ನು ಸಪ್ಟೆಂಬರ್ 1, 2024ರಂದು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶ್ರೀ ಸುನಿಲ್ ಕುಮಾರ್, ಮಾನ್ಯ ಶಾಸಕರು, ಕಾರ್ಕಳ ಇವರು ಮಾತನಾಡಿ ‘ಎಲ್ಲರೂ ಸ್ವಚ್ಛತೆಯನ್ನು ಕಾಪಾಡುವುದರಿಂದ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಸ್ವಚ್ಛತೆ ಇರುವ ಕಡೆ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ತಡೆಗಟ್ಟಬಹುದಾಗಿದೆ. ನಮ್ಮ ಮನೆ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿದಾಗಲೇ ಸ್ವಚ್ಛ ಭಾರತವಾಗಿ ಮೂಡಿ ಬರಲು ಸಾಧ್ಯ’ ಎಂದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಬಿ ಗಣನಾಥ ಶೆಟ್ಟಿ ರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ‘ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡುವುದು ನಮ್ಮೆಲ್ಲರ ಕರ್ತವ್ಯ. ಪ್ರಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾದರೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಇದು ನಾವು ಅವರಿಗೆ ನೀಡುವ ಉತ್ತಮ ಉಡುಗೊರೆಯಾಗಿದೆ. ಮಕ್ಕಳು ಬೆಳಗಿದರೆ ಸಮಾಜ ಬೆಳಗುತ್ತದೆ ‘ ಎಂದರು.
ಕಾರ್ಯಕ್ರಮದಲ್ಲಿ ಹಿರ್ಗಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಸಂತೋಷ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎ ಮತ್ತು ಬಿ ಘಟಕದ ಅಧ್ಯಕ್ಷರುಗಳಾದ ಶ್ರೀ ಸತೀಶ್ ಪೂಜಾರಿ ಹಾಗೂ ಶ್ರೀ ಸುಭಾಷ್, ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರಾದ ಶ್ರೀ ಆದರ್ಶ ಎಂ ಕೆ, ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿಗಳು, ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಉಮೇಶ್, ಬೋಧಕ ಮತ್ತು ಬೋಧಕೇತರ ವೃಂದದವರು, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಜೀವಶಾಸ್ತ್ರ ಉಪನ್ಯಾಸಕ ಶ್ರೀ ಲೋಹಿತ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಜೋಡುರಸ್ತೆಯಿಂದ ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಜೂರುವರೆಗೆ, ಮಾವಿನಕಟ್ಟೆಯಿಂದ ಕಾನಂಗಿ ವೆಂಕಟೇಶ್ವರ ದೇವಸ್ಥಾನದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ, ವಾಹನ ಸಂಚಾರಕ್ಕೆ ಅಡಚಣೆಯಾಗುವಂತಿದ್ದ ಗಿಡಗಂಟಿಗಳ ನಿರ್ಮೂಲನೆ ಮಾಡಿ ವಾಹನಗಳ ಸುಲಲಿತ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.