Follow us:-
ಕಾರ್ಕಳ ಕ್ರಿಯೇಟಿವ್‌ ಕಾಲೇಜಿನಲ್ಲಿ “ಕೆಸರ್ಡೊಂಜಿ ದಿನ” ಮಣ್ಣಿನೊಂದಿಗೆ ಕಲಿಕಾ ಅನುಭವ ಕಾರ್ಯಕ್ರಮ
  • By Creative Edu Web Admin
  • January 24, 2024
  • No Comments

ಕಾರ್ಕಳ ಕ್ರಿಯೇಟಿವ್‌ ಕಾಲೇಜಿನಲ್ಲಿ “ಕೆಸರ್ಡೊಂಜಿ ದಿನ” ಮಣ್ಣಿನೊಂದಿಗೆ ಕಲಿಕಾ ಅನುಭವ ಕಾರ್ಯಕ್ರಮ

ಕಾರ್ಕಳದ ಹಿರ್ಗಾನ ಗ್ರಾಮದಲ್ಲಿರುವ ʼಬೆಂಗಾಲ್‌ʼ ಕೃಷಿ ಭೂಮಿಯಲ್ಲಿ ಕ್ರಿಯೇಟಿವ್‌ ಪಿ.ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಪ್ರದರ್ಶನದೊಂದಿಗೆ ಕೆಸರಿನಲ್ಲಿ ಜೀವನದ ಕಲಿಕೆ ಮತ್ತು ವಿವಿಧ ಆಟೋಟ ಕಾರ್ಯಕ್ರಮಗಳು ನಡೆದವು.
ಕೆಸರ್ಡೊಂಜಿ ದಿನ ಕಾರ್ಯಕ್ರಮವನ್ನು ನೇಜಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಹಿರ್ಗಾನ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿಯವರು ಇಂದು ನಮಗೆ ಧನ ಸಂಪಾದನೆಗೆ ಅನೇಕ ಮಾರ್ಗಗಳಿವೆ. ಆದರೆ ಹೊಟ್ಟೆ ತುಂಬಿಸಲು ರೈತ ಬೆಳೆದ ಬೆಳೆಯೇ ಬೇಕಾಗುತ್ತದೆ. ಆಹಾರದ ಉತ್ಪಾದನೆ ಇಲ್ಲದೇ ಹೋದರೆ ಎಷ್ಟೇ ಹಣವಿದ್ದರೂ ಬದುಕಲು ಅಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಕೃಷಿಯನ್ನು ತುಚ್ಛವಾಗಿ ಕಾಣದೇ ಭೂಮಿತಾಯಿಯ ಸೇವೆ ಎಂದು ಭಾವಿಸುವಂತಾಗಿ, ಭಾರತವು ಎಲ್ಲಾ ಕ್ಷೇತ್ರದಲ್ಲಿ ನಾಯಕತ್ವ ವಹಿಸುವಂತಾಗಲಿ, ಹಾಳು ಬಿದ್ದಿರುವ ಕೃಷಿ ಜಮೀನು ಬೆಳೆ ಬೆಳೆಯುವಂತಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಮಾತನಾಡಿ ʼಕೈಕೆಸರಾದರೆ ಬಾಯಿ ಮೊಸರುʼ ಎಂಬ ಮಾತಿನಂತೆ ಇಂದು ಎಲ್ಲರೂ ಕೃಷಿ ಚಟುವಟಿಕೆಯಿಂದ ದೂರವಾಗುತ್ತಿದ್ದೇವೆ. ಒಬ್ಬ ಕೃಷಿಕ ಪಡುವ ಕಷ್ಟ, ಬೆಳೆ ಬೆಳೆದು ರೈತನ ಕೈ ಸೇರಬೇಕಾದರೆ ತುಂಬಾ ದಿನಗಳು ಬೇಕಾಗುತ್ತದೆ. ಆಧುನಿಕತೆಯ ಭರಾಟೆಯ ಮಧ್ಯೆ ನಾವು ನಮ್ಮ ಮೂಲ ಕಸುಬಾದ ಕೃಷಿ, ಉಳುಮೆಯನ್ನೇ ಮರೆಯುತ್ತಿದ್ದೇವೆ. ಮುಂದೊಂದು ದಿನ ಆಹಾರದ ಕೊರತೆ ಉಂಟಾಗುವ ಸಂದರ್ಭ ಎದುರಾಗಬಹುದು ಅದಕ್ಕಾಗಿ ನಾವು ಎಚ್ಚೆತ್ತು ಕೊಳ್ಳಬೇಕಾಗಿದೆ. ಕೆಸರಿನಿಂದ ಅನೇಕ ರೋಗ ರುಜಿನಗಳು ದೂರವಾಗುತ್ತದೆ ಎಂದು ನುಡಿದರು.
ಸಂಸ್ಥಾಪಕರಲ್ಲಿ ಒಬ್ಬರಾದ ಅಮೃತ್‌ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಗತಿಪರ ಕೃಷಿಕ ಜಗದೀಶ್‌ ಕಡಂಬ, ಉದ್ಯಮಿ ಶ್ರೀಧರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದದರು.
ಕುಮಾರಿ ತ್ರಿಶಾ ಶೆಟ್ಟಿ ಸ್ವಾಗತಿಸಿದರು. ಕುಮಾರಿ ಸಾನ್ವಿ ರಾವ್‌ ನಿರೂಪಿಸಿ ವಂದಿಸಿದರು. ನಂತರ ತುಳುನಾಡಿನ 50ಕ್ಕೂ ಅಧಿಕ ವಿಶೇಷ ತಿಂಡಿ ತಿನಿಸುಗಳ ವಿತರಣೆ ನಡೆಯಿತು. ಹಳೆಯ ಕಾಲದ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ವಿಠ್ಠಲ್‌ ಕುಲಾಲ್‌, ಗೋಕುಲ್‌ ದಾಸ್‌ ವಾಗ್ಳೆಯವರನ್ನು ಸನ್ಮಾನಿಸಲಾಯಿತು.
ಸಾಯಂಕಾಲ ಕಾರ್ಯಕ್ರಮದ ಸಮಾರೋಪ ನಡೆಯಿತು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆ ಯೋಗೀಶ್‌ ಕಿಣಿ ಯವರು ಕೃಷಿ ಸಂಸ್ಕೃತಿಯೇ ಭಾರತದ ಜೀವಾಳ ಇದನ್ನು ನಾವು ಅರಿತು ಬದುಕಬೇಕಾಗಿದೆ ಎಂದರು. ಹಾಗೂ ಕನ್ನಡ ಪ್ರಭ ದಿನಪತ್ರಿಕೆಯ ವರದಿಗಾರ ರಾಮ್‌ ಅಜೆಕಾರ್‌ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು.
ಸಂಸ್ಥಾಪಕರಾದ ಅಶ್ವತ್‌ ಎಸ್‌. ಎಲ್‌ ರವರು ವೈಜ್ಞಾನಿಕ ಪ್ರಗತಿಯಷ್ಟೇ, ಕೃಷಿ ಕ್ಷೇತ್ರದಲ್ಲೂ ಆವಿಷ್ಕಾರ ನಡೆದು ಆರೋಗ್ಯಯುತವಾದ ಸಂಮೃದ್ಧ ಬದುಕು ಎಲ್ಲರಿಗೂ ದೊರೆಯುವಂಯತಾಗಲಿ ಎಂದು ಹಾರೈಸಿದರು. ಪ್ರಾಚಾರ್ಯರಾದ ವಿದ್ವಾನ್‌ ಗಣಪತಿ ಭಟ್‌ ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡುತ್ತಾ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಬಡತನವಿಲ್ಲ, ಪ್ರತಿ ಅನ್ನದ ಅಗುಳಿನ ಮೇಲೆ ಅತೀವ ಗೌರವವಿರಲಿ ಎಂದು ಕಿವಿಮಾತು ಹೇಳಿದರು. ಸಂಸ್ಥಾಪಕರಾದ ಆದರ್ಶ ಎಂ.ಕೆ, ಅಮೃತ್‌ ರೈ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ವಿನಾಯಕ ಜೋಗ್‌ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು, ರಾಘವೇಂದ್ರ ರಾವ್‌ ಸ್ವಾಗತಿಸಿದರು, ಉಮೇಶ್‌ ಕಾರ್ಯಕ್ರಮ ನಿರೂಪಿಸಿದರು, ಚಂದ್ರಕಾಂತ ಆಚಾರ್ಯ ವಂದನಾರ್ಪಣೆಗೈದರು.