ಹೆಚ್.ಕೆ. ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವೈಭವದ ಜನಪದ ಕಲಾ ಸಂಭ್ರಮ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜು, ಇಲ್ಲಿ ಆಗಸ್ಟ್ 22ರ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು, (ರಿ) ಬೆಂಗಳೂರು. ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ಹಾಸನ ಇವರ ವತಿಯಿಂದ ಜನಪದ ಕಲಾ ಸಂಭ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ದೇವಾನಂದ ವರ ಪ್ರಸಾದ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಜಾನಪದ ಸಾಹಿತ್ಯದ ಉಗಮ ಬೆಳವಣಿಗೆ ಮತ್ತು ಜಾನಪದ ತ್ರಿಪದಿಗಳು ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ತಿಳಿಸುತ್ತವೆ ಎಂದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ವಿಮಲ್ ರಾಜ್ ಜಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ಜನಪದ ಪರಿಷತ್ತು ಜಿಲ್ಲಾಧ್ಯಕ್ಷರಾದ ಡಾ. ಹಂಪನಹಳ್ಳಿ ತಿಮ್ಮೇಗೌಡ ಅವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ಜನಪದ ಸಾಹಿತ್ಯದ ಮೂಲ, ಉಗಮ, ಬೆಳವಣಿಗೆ, ಜಾನಪದ ಆಚರಣೆಯ ಮೂಲ ಉದ್ದೇಶ, ಜನಪದ ಸಾಹಿತ್ಯದಲ್ಲಿ ಮಣ್ಣಿನ ಸೊಗಡಿದೆ, ಆಚಾರ ವಿಚಾರ, ಪರಂಪರೆ, ಕಲೆ, ಜನರ ಜೀವನ ವಿಧಾನ, ರೀತಿ ನೀತಿಗಳು, ಮೌಲ್ಯ ಮತ್ತು ಶಿಕ್ಷಣವಿದೆ. ಜನಪದದಲ್ಲಿ ಜಾತಿ, ಧರ್ಮ, ಪ್ರಾದೇಶಿಕತೆ ಎಂಬುದು ಇಲ್ಲ. ಜನಪದ ಕಲೆಗಳನ್ನು, ಸಾಹಿತ್ಯವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದು ಅಭಿಪ್ರಾಯ ಪಟ್ಟರು . ಜಾನಪದ ಸಂಭ್ರಮದಲ್ಲಿ ಕಲಾವಿದರು ಜನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಜಾನಪದ ಕಲೆಗಳಾದ ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತಗಳನ್ನು ಸಭಿಕರ ಮನಸೂರೆಗೊಂಡಿತು
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರಾದ ಡಾ. ಹಂಪನಳ್ಳಿ ತಿಮ್ಮೇಗೌಡ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ದೇವಾನಂದ ವರ ಪ್ರಸಾದ, ಹೆಚ್. ಕೆ. ಎಸ್ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಹೆಚ್ ಎಸ್ ಪ್ರಶಾಂತ್ ಗೌಡ, ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ವಿಮಲ್ ರಾಜ್ ಜಿ, ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರವೀಣ್ ಎ, ಉಪ ಪ್ರಾಂಶುಪಾಲರಾದ ಆದಿತ್ಯವಟಿ ಕೆ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ ಅವರು ಸ್ವಾಗತಿಸಿದರೆ ಸಂಸ್ಕೃತ ಉಪನ್ಯಾಸಕರಾದ ರವಿಶಂಕರ್ ಹೆಗಡೆ ಅವರು ವಂದಿಸಿದರು. ಕನ್ನಡ ಉಪನ್ಯಾಸಕರಾದ ರಮೇಶ್ ಎಂ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.