Follow us:-
ಸಹಜ ಕೃಷಿಯಿಂದ ಬದುಕು ಹಸನುಗೊಳ್ಳಲು ಸಹಕಾರಿ – ಶ್ರೀನಿವಾಸ ಭಟ್, ಇರ್ವತ್ತೂರು, ಪ್ರಗತಿಪರ ಸಾವಯವ ಕೃಷಿಕರು.
  • By Creative Edu Web Admin
  • January 29, 2024
  • No Comments

ಸಹಜ ಕೃಷಿಯಿಂದ ಬದುಕು ಹಸನುಗೊಳ್ಳಲು ಸಹಕಾರಿ – ಶ್ರೀನಿವಾಸ ಭಟ್, ಇರ್ವತ್ತೂರು, ಪ್ರಗತಿಪರ ಸಾವಯವ ಕೃಷಿಕರು.

ಮಾನವನ ದುರಾಸೆಯಿಂದ ಇಂದು ಜಗತ್ತು ಆಹಾರ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ. ಈ ದುಸ್ಥಿತಿ ಮುಂದುವರಿಯಬಾರದೆಂದರೆ ಪ್ರತಿಯೊಬ್ಬರೂ ಈ ಭೂಮಿ, ಪರಿಸರ, ನೀರನ್ನು ಶುದ್ಧವಾಗಿಡುವುದರ ಜೊತೆ ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡರೆ ಮಾತ್ರ ಬದುಕಲು ಸಾಧ್ಯವಿದೆ. ಇಲ್ಲವಾದಲ್ಲಿ ಎಲ್ಲವೂ ರೋಗಗಳಿಂದಲೇ ತುಂಬಿ, ಆರೋಗ್ಯವಂತ ಸಮಾಜ ಇರಲಾರದು ಎಂದು ಪ್ರಗತಿಪರ ಕೃಷಿಕ ಶ್ರೀನಿವಾಸ ಭಟ್‌ ಇರ್ವತ್ತೂರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನಲ್ಲಿ ಭಾರತೀಯ ಕಿಸಾನ್‌ ಸಂಘ ಹಾಗೂ ಸಂಜೀವಿನಿ ಸಹಕಾರ ಸಂಘ ಇವರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಮಣ್ಣು, ಆಕಾಶ, ನೀರು, ಗಾಳಿ ಇವುಗಳನ್ನು ನಾವು ಸ್ವಚ್ಛವಾಗಿಡದಿದ್ದರೆ, ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ. ಅದನ್ನು ಉಳಿಸಿ ಬೆಳೆಸೋಣ ಎಂದು ಅಭಿಪ್ರಾಯ ಪಟ್ಟರು.

ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಕಿಸಾನ್‌ ಸಂಘದ ಕಾರ್ಕಳ ವಲಯದ ಮಾಜಿ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಶ್ರೀ ಉಮನಾಥ ರಾನಡೆ ಮಾಳ ಅವರು ಮಾತನಾಡಿ ಯಾವ ಕೃಷಿ ಮಾಡಿದರೂ ಲಾಭದ ದೃಷ್ಟಿಯಿಂದಲೇ ಮಾಡಬಾರದು. ಆತ್ಮ ತೃಪ್ತಿಗಾಗಿ ಕೃಷಿ ಚಟುವಟಿಕೆ ನಡೆಸಿ ಆರೋಗ್ಯ ಪೂರ್ಣ ಬದುಕು ಕಟ್ಟಿಕೊಳ್ಳೋಣ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕ್ರಿಯೇಟಿವ್‌ ಕಾಲೇಜಿನ ಸಂಸ್ಥಾಪಕರಲ್ಲೊಬ್ಬರಾದ ಅಮೃತ್‌ ರೈ ಮಾತನಾಡಿ ಸಾವಯವ ಉತ್ಪನ್ನಗಳನ್ನು ಜನರ ಮನೆ ಮತ್ತು ಮನಸ್ಸಿಗೆ ತಲುಪುವಂತೆ ಮಾಡಿದಾಗ ಸಾವಯವ ಕೃಷಿ ಲಾಭದಾಯಕ ವೃತ್ತಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಗಣನಾಥ ಶೆಟ್ಟಿಯವರು ಮಾತನಾಡಿ ಇಂದು ನಾವೆಲ್ಲ ಆರೋಗ್ಯದಿಂದ ಉಳಿಯಲು ಶುದ್ಧವಾದ ಮಣ್ಣು, ನೀರು ಮತ್ತು ಆಹಾರ ಸಿಗಬೇಕಾಗಿದೆ. ಅದನ್ನು ನಾವೆಲ್ಲ ಸೇರಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಅಭಿಲಾಷೆ ವ್ಯಕ್ತಪಡಿಸಿದರು. ಭಾರತೀಯ ಕಿಸಾನ್‌ ಸಂಘದ ಕಾರ್ಕಳ ವಲಯದ ಅಧ್ಯಕ್ಷರಾದ ಶ್ರೀ ಗೋವಿಂದ ರಾಜ್ ಭಟ್‌ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Leave a Reply

Your email address will not be published. Required fields are marked *