ಹೆಚ್ ಕೆ ಎಸ್ ಪಿಯು ಕಾಲೇಜಿನಲ್ಲಿ ಸಂಭ್ರಮದ ಕ್ರಿಯೇಟಿವ್ ನುಡಿಹಬ್ಬ
ದಿನಾಂಕ:11-11-2024 ರಂದು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಕ್ರಿಯೇಟಿವ್ ನುಡಿ ಹಬ್ಬ’ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ಅಶ್ವಥ್ ಎಸ್ ಎಲ್ ಅವರು ಕನ್ನಡ ನಾಡು-ನುಡಿ ಸಂಸ್ಕೃತಿಯನ್ನು ಸಂಭ್ರಮಿಸುವ ಹಬ್ಬ ಕ್ರಿಯೇಟಿವ್ ನುಡಿ ಹಬ್ಬ. ಸಾವಿರಾರು ವರ್ಷಗಳ ಇತಿಹಾಸವನ್ನು ಒಳಗೊಂಡಿರುವ ಕನ್ನಡ ಭಾಷೆ ನಮ್ಮ ಹೆಮ್ಮೆಯ ಭಾಷೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಫಿಲಂ ಫೇರ್ ಪ್ರಶಸ್ತಿ ಪುರಸ್ಕೃತರು, ನಾಡಿನ ಹೆಸರಾಂತ ಹಿರಿಯ ಕವಿಗಳಾದ ಶ್ರೀ ಬಿ ಆರ್ ಲಕ್ಷ್ಮಣರಾವ್ ಅವರು ಆಂಗ್ಲ ಭಾಷೆಯು ಜಗತ್ತಿನ ಎಲ್ಲಾ ಭಾಷೆಗಳನ್ನು ಎರವಲಾಗಿ ಪಡೆದುಕೊಂಡಿದೆ. ಕನ್ನಡ ಎನ್ನುವುದು ನಮ್ಮ ಹೃದಯದ ಭಾಷೆ, ತಮ್ಮ ಸ್ವರಚನೆಯ ಹಲವಾರು ಕವನಗಳನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳ ಮನವನ್ನ ತಣಿಸಿದರು. ಕನ್ನಡದ ಉಳಿವು ಬೆಳವಣಿಗೆಯ ಮೂಲ ಪೋಷಕರು ಹಾಗೂ ಶಿಕ್ಷಕ ವೃಂದದವರು. ಎಲ್ಲಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದೊಂದಿಗೆ ಕನ್ನಡದ ಭವಿಷ್ಯವು ಉಜ್ವಲವಾಗಿರಲಿ ಎಂದು ಆಶಿಸಿದರು. ಹೆಚ್ ಕೆ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಗಳು, ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹೆಚ್ ಕೆ ಸುರೇಶ್ ಅವರು ಕನ್ನಡ ಎನ್ನುವುದು ಮಾತೃಭಾಷೆ, ನಾವು ನಮ್ಮ ತಾಯಿಗೆ ಆದ್ಯತೆ ಕೊಡುವಂತೆ ನಮ್ಮ ಮಾತೃಭಾಷೆಗೆ ಆದ್ಯತೆ ಕೊಡಬೇಕು ಎನ್ನುತ್ತಾ ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಹೆಚ್ ಕೆ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಹೆಚ್ ಎಸ್ ಪ್ರಶಾಂತ್ ಗೌಡ, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ವಿಮಲ್ ರಾಜ್ ಜಿ, ಪ್ರಾಂಶುಪಾಲರಾದ ಪ್ರವೀಣ್ ಎ, ಉಪ ಪ್ರಾಂಶುಪಾಲರಾದ ಆದಿತ್ಯ ವಟಿ ಕೆ ಅವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮವನ್ನು ಸಂಸ್ಕೃತ ಉಪನ್ಯಾಸಕರಾದ ರವಿಶಂಕರ್ ಹೆಗಡೆ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ ನಿರೂಪಿಸಿದರೆ, ಕನ್ನಡ ಉಪನ್ಯಾಸಕರಾದ ರಮೇಶ್ ಎಂ ಅವರು ವಿಶೇಷ ಆಹ್ವಾನಿತರಾದ ಬಿ ಆರ್ ಲಕ್ಷ್ಮಣ್ ರಾವ್ ಅವರನ್ನು ಪರಿಚಯ ಮಾಡಿಕೊಟ್ಟರು. ಭೌತಶಾಸ್ತ್ರ ಉಪನ್ಯಾಸಕರಾದ ಲಕ್ಷ್ಮಣ್ ಬಜಿಲ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.