ಹೆಚ್ .ಕೆ .ಎಸ್ ಪಿ ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕ್ರಿಯೇಟಿವ್ ಸ್ಫೂರ್ತಿ ಮಾತು ಕಾರ್ಯಕ್ರಮ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್.ಕೆ.ಎಸ್ ಪಿ ಯು ಕಾಲೇಜು, ಹಾಸನ ಇಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮಾತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ಅಶ್ವತ್ಥ್ ಎಸ್. ಎಲ್ ಅವರು “ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಸಾಮಾಜಿಕ ಮೌಲ್ಯಗಳನ್ನು ಬೆಳೆಸುವಂತದ್ದು” ಎಂದು ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ನಿವೃತ್ತ ಲೋಕಾಯುಕ್ತರು ಹಾಗೂ ಸರ್ವೋಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ನ್ಯಾಯಮೂರ್ತಿಗಳು ಆದ ಶ್ರೀ ಎನ್ ಸಂತೋಷ್ ಹೆಗ್ಡೆ ಅವರು ‘ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಅದರ ಪರಿಣಾಮ’ ಎಂಬ ವಿಷಯದ ಕುರಿತಾಗಿ ಮಾತನಾಡುತ್ತಾ ಹೆಚ್. ಕೆ. ಎಸ್ ಪಿಯು ಕಾಲೇಜಿನ ಸ್ಪೂರ್ತಿ ಮಾತು ಕಾರ್ಯಕ್ರಮವು 1834ನೇ ಕಾರ್ಯಕ್ರಮವಾಗಿದೆ. ನಮ್ಮ ಹಿರಿಯರು ಕಟ್ಟಿದ ತೃಪ್ತಿ ಎಂಬ ಮೌಲ್ಯ ದುರಾಸೆಯನ್ನು ಮಟ್ಟ ಹಾಕುತ್ತದೆ. ದುರಾಸೆಯ ಮಟ್ಟ ಹೆಚ್ಚಾದರೆ ಶಾಂತಿ ನಾಶವಾಗುತ್ತದೆ. ಕಾನೂನು ಚೌಕಟ್ಟಿನ ಒಳಗಿರುವ ಹಣವನ್ನು ಮಾತ್ರ ಬಳಸಿ, ಭಾರತ ಸರ್ಕಾರದ ಶಾಸಕಾಂಗ, ಕಾರ್ಯಾಂಗದಲ್ಲಿ ನಡೆಯುವ ಭ್ರಷ್ಟಾಚಾರದ ಅವ್ಯವಹಾರಗಳ ಬಗ್ಗೆ ಮಾತನಾಡುತ್ತಾ, “ಮಾನವ ಹುಟ್ಟುವಾಗ ಮಾನವನಾಗಿ ಹುಟ್ಟದಿದ್ದರೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮಾನವನಾಗಿ ಸಾಯಬೇಕು” ಎಂಬ ಕಿವಿ ಮಾತನ್ನು ಹೇಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಹಲವು ಜವಾಬ್ದಾರಿಗಳನ್ನು ತಿಳಿಯಪಡಿಸಿದರು.
ಹೆಚ್. ಕೆ. ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಹೆಚ್.ಎಸ್. ಪ್ರಶಾಂತ್ ಗೌಡ ಅವರು ಕಾರ್ಯಕ್ರಮವನ್ನು ಕುರಿತು ಮಾತುಗಳನ್ನಾಡಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ವಿಮಲ್ ರಾಜ್ ಜಿ ಅವರು ಕಾರ್ಯಕ್ರಮದ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಪ್ರವೀಣ್ ಎ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಕೃತ ಉಪನ್ಯಾಸಕರಾದ ರವಿಶಂಕರ್ ಹೆಗಡೆ ಅವರು ನಿರೂಪಿಸಿ, ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕರಾದ ಶಿಲ್ಪ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳನ್ನು ಕನ್ನಡ ಉಪನ್ಯಾಸಕರಾದ ರಮೇಶ್ ಎಂ ಅವರು ಪರಿಚಯಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.