ಹೆಚ್.ಕೆ. ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವೈಭವದ ಕ್ರಿಯೇಟಿವ್ ಆವಿರ್ಭವ್-2024
ದಿನಾಂಕ: 11/01/2025 ರಂದು
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜು, ಇಲ್ಲಿ ವಾರ್ಷಿಕೋತ್ಸವ ಕ್ರಿಯೇಟಿವ್ ಅವಿರ್ಭವ್-2024 ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ಅಶ್ವಥ್ ಎಸ್ ಎಲ್ ಅವರು ನಮ್ಮ ಸಂಸ್ಥೆಯು ಶಿಕ್ಷಣದ ಜೊತೆಗೆ ಸಾಹಿತ್ಯಿಕ ವಿಚಾರಗಳನ್ನು ಮುಖ್ಯವಾಗಿಟ್ಟುಕೊಂಡು ನಡೆಯುತ್ತಿರುವ ಸಂಸ್ಥೆ, ನಮ್ಮ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿವುದು ನಮ್ಮ ಕಾಲೇಜಿನ ಹೆಮ್ಮೆಯ ಸಂಗತಿ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮಾತುಗಳನ್ನಾಡುವುದರ ಮೂಲಕ ಪ್ರಸ್ತಾವಿಕ ನುಡಿಗಳನ್ನಾಡಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ಲೇಖಕರು, ನಟರು, ಹಾಗೂ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಇಂದಿನ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸುಸಜ್ಜಿತವಾದ ಕಾಲೇಜು ಕ್ರಿಯೇಟಿವ್ ಸಂಸ್ಥೆ. ಈ ಸಂಸ್ಥೆಯ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಕುರುಹುಗಳಾಗದೆ ಸಾಂಸ್ಕೃತಿಕ ಚಟುವಟಿಕೆ ಸ್ಪರ್ಧೆಗಳಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರ್ವಾಂಗೀಣ ಬೆಳವಣಿಗೆಯನ್ನು ಹೊಂದಿದ್ದಾರೆ. ನಮ್ಮ ನಾಡು ಪಶ್ಚಿಮ ಘಟ್ಟಗಳಿಂದ, ಕರಾವಳಿ ತೀರದಿಂದ, ವನ್ಯಜೀವಿಗಳಿಂದ ಸೊಗಸಾಗಿರುವ ನಾಡು. ತರಗತಿ ಒಂದು ಬಗೆಯ ಶಿಕ್ಷಣ ಕೊಟ್ಟರೆ ನಿಸರ್ಗ ಹಲವಾರು ಶಿಕ್ಷಣ ನೀಡುತ್ತದೆ. ಇವತ್ತಿನ ಸಂಕ್ರಮಣ ಕಾಲದಲ್ಲಿ ಪಿಯುಸಿ ಯು ತಿರುವಿನ ಘಟ್ಟವಾಗಿದೆ. ವಿದ್ಯಾರ್ಥಿಗಳು ಸಮಯವನ್ನು ಪರಿಪಾಲನೆ ಮಾಡುವುದರ ಜೊತೆಗೆ ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಬೇಕು. ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ಭಾರತದ ಸಂಸ್ಕೃತಿಯ ಅಗಾಧವಾದ ಪರಂಪರೆಯಾಗಿದೆ ಎಂದು ಕಾರ್ಯಕ್ರಮದ ಕುರಿತು ಅಭಿವರ್ಣಿಸಿದರು. ಪ್ರಾಂಶುಪಾಲರಾದ ಪ್ರವೀಣ್ ಎ ಅವರು 2024- 25ನೇ ಶೈಕ್ಷಣಿಕ ಸಾಲಿನ ಕಾಲೇಜು ವಾರ್ಷಿಕ ವರದಿಯನ್ನು ವಾಚಿಸಿದರು. ಹೆಚ್. ಕೆ .ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಹೆಚ್.ಎಸ್. ಪ್ರಶಾಂತ್ ಗೌಡ ರವರು ವಾರ್ಷಿಕೋತ್ಸವದ ಸಂಭ್ರಮ ಕೇವಲ ಒಂದು ದಿನದ ಸಂಭ್ರಮವಲ್ಲ ಇಡೀ ವರ್ಷದ ಸಾಧನೆಯ ಸನ್ಮಾನ. ನಮ್ಮ ಮನಸ್ಸು, ದೇಹ ಕೇಂದ್ರೀಕೃತವಾದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ವಿಮಲ್ ರಾಜ್ ಜಿ ಅವರು ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಯ ಕುರಿತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹೆಚ್.ಕೆ.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹೆಚ್. ಕೆ. ಸುರೇಶ್ ರವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ಕರಾವಳಿಯ ಶಿಕ್ಷಣವನ್ನು ಹಾಸನಕ್ಕೆ ಕರೆ ತಂದಿದ್ದೇವೆ. ಶಿಕ್ಷಣಕ್ಕೆ ಹಾಸನಾಂಬೆ ಅತ್ಯುತ್ತಮ ವಾತಾವರಣವನ್ನು ಸೃಷ್ಟಿಸಿ ಕೊಟ್ಟಿದ್ದಾರೆ. ಟೀಕೆಗಳು ಅಳಿಸಿ ಹೋಗುತ್ತವೆ ಕಾರ್ಯಗಳು ಉಳಿಯುತ್ತವೆ ಎಂಬ ಕವಿಯ ವಾಣಿಯಂತೆ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯುವಂತಾಗಬೇಕು ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
2023 -24ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಪೂರ್ವ ತರಗತಿಯಲ್ಲಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು ಹಾಗೂ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಸಂಸ್ಥೆಯ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರುಗಳಾದ ಶ್ರೀ ಅಮೃತ್ ರೈ, ಡಾ. ಗಣನಾಥ ಶೆಟ್ಟಿ ಬಿ, ಶ್ರೀ ಆದರ್ಶ್ ಎಂ ಕೆ, ಹೆಚ್. ಕೆ. ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಮತಿ ಕೋಮಲ ಎನ್. ಸುರೇಶ್ ಹಾಗೂ ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಆದಿತ್ಯ ವಟಿ ಕೆ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರೆ ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ ಅವರು ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕರಾದ ರವಿಶಂಕರಹೆಗಡೆ ಅವರು ವಂದಿಸಿದರು. ಕನ್ನಡ ಉಪನ್ಯಾಸಕರಾದ ರಮೇಶ್ ಎಂ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ತದನಂತರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ “ವಿವಿಧತೆಯಲ್ಲಿ ಏಕತೆ” ಎಂಬ ಪರಿಕಲ್ಪನೆಯ ನೃತ್ಯವೈಭವ ನೆರೆದ ಜನಸ್ತೋಮದ ಮನಸೂರೆಗೊಂಡಿತು.