ಕಲ್ಯಾಣಪುರ ತ್ರಿಶಾ ಪ. ಪೂ. ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭ
“ದೇಶವೇ ಮೊದಲು, ಪರಂಪರೆಯ ಅರಿವು ನಮಗಿರಲಿ – ಪ್ರೊಫೆಸರ್ ಚಂದ್ರಪ್ರಭಾ ಹೆಗ್ಡೆ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ, ಇಲ್ಲಿ 78ನೇಯ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸ್ರೂರು ಶಾರದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಚಂದ್ರಪ್ರಭಾ ಹೆಗ್ಡೆ ಇವರು ಧ್ವಜಾರೋಹಣ ಗೈದು ದೇಶ ಸೇವೆಯೇ ಈಶ ಸೇವೆ, ಭಾಷಾ ಎಚ್ಚರಿಕೆ, ಗುರು ಶಿಷ್ಯ ಪರಂಪರೆ- ಸಂಬಂಧ ಮಾತೃದೇವೋಭವ ಇದರ ಚರಿತಾರ್ಥ, ಜೀವನ ಮೌಲ್ಯಗಳ ಅಳವಡಿಕೆ, ಮೊದಲಾದ ವಿಚಾರಗಳನ್ನು ಉಲ್ಲೇಖಿಸುತ್ತಾ, ಭಗವದ್ಗೀತೆಯ ಮೇರುವಾಕ್ಯ “ಸ್ವಧರ್ಮೇ ನಿಧನಂ ಶ್ರೇಯ:” ಇದನ್ನು ಚೆನ್ನಾಗಿ ವ್ಯಾಖ್ಯಾನಿಸಿದರು. ವೇದಮಾತೆಯ ರಕ್ಷಣೆ, ಭೂಮಾತೆಯ ರಕ್ಷಣೆಗಳನ್ನು ಮಾಡುತ್ತಾ ನಮ್ಮಲ್ಲಿ ಅಡಗಿರುವ ಅಂತರ್ ಶಕ್ತಿಯ ಉದ್ದೀಪನ ಆಗಬೇಕಾಗಿದೆ. ಅಂತರಂಗ ಶಕ್ತಿಯನ್ನು ಜಾಗೃತಗೊಳಿಸಿ, ಶೋಧಿಸಿ, ಸಾಧಿಸಿ ಪೋಷಿಸಬೇಕು, ದೇಶಕ್ಕಾಗಿ ನಾನಾಗಬೇಕೇ ಹೊರತು ನನಗಾಗಿ ದೇಶ ಅಲ್ಲ. ಕನಿಷ್ಠ ಅವಧಿಯಲ್ಲಿ ಗರಿಷ್ಠ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿ ವೃಂದವನ್ನು ಹುರಿದಿಂಬಿಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ಡಾ.ಬಿ ಗಣನಾಥ ಶೆಟ್ಟಿಯವರು ಹಾಗೂ ಶ್ರೀ ವಿಮಲ್ ರಾಜ್ ಜಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ತ್ರಿಶಾ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಭಂಡಾರಿ, ಕಾರ್ಯದರ್ಶಿಗಳಾದ ಶ್ರೀಮತಿ ಸರಿತಾ ಭಂಡಾರಿ ಹಾಗೂ ಟ್ರಸ್ಟಿ ಶ್ರೀ ಕಾರ್ತಿಕ್ ಭಂಡಾರಿಯವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರದ ಶ್ರೀ ರಾಮಕೃಷ್ಣ ಹೆಗಡೆಯವರು ಆಗಮಿಸಿದ ಅತಿಥಿ ಅಭ್ಯಾಗತರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ವಿದ್ಯಾಸಂಸ್ಥೆಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ಪೃಥ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು.
ಧ್ವಜಾರೋಹಣ ಕಾರ್ಯಕ್ರಮದ ನಂತರ ಕ್ರಿಯೇಟಿವ್ ಸವಿಗಾನ ಶೀರ್ಷಿಕೆಯ ಅಡಿಯಲ್ಲಿ “ಮಾಸ್ಟರ್ ಡ್ರಾಮ ಆರ್ಟ್ಸ್” ಉಡುಪಿ, ಇವರಿಂದ ಸುಂದರ ದೇಶಭಕ್ತಿ ಮತ್ತು ಸದಭಿರುಚಿಯ ಗೀತ ಗಾಯನ ಕಾರ್ಯಕ್ರಮ ನೆರವೇರಲ್ಪಟ್ಟಿತು.